ಬಘೀರ ಎಂದರೆ ಕರಿ ಚಿರತೆ. ಹೀರೋ ಪ್ರತಿನಿಧಿಸುವ ಮುಖವಿದು’-ದೀಪಾವಳಿ ಹಬ್ಬಕ್ಕೆ ಶ್ರೀಮುರಳಿ, ರುಕ್ಮಿಣಿ ವಸಂತ ಹೀರೋ!

ಶ್ರೀಮುರಳಿ ಹಾಗೂ ರುಕ್ಮಿಣಿ ವಸಂತ್‌ ನಟನೆಯ ‘ಬಘೀರ’ ಸಿನಿಮಾ ಇದೇ ಗುರುವಾರ ಅಂದರೆ ಅಕ್ಟೋಬರ್‌ 31ರಂದು ರಿಲೀಸ್‌ ಆಗಲಿದೆ. ಈಗಾಗಲೇ ಇದರ ಹಾಡುಗಳು ಹಾಗೂ ಟ್ರೇಲರ್‌ ಕುತೂಹಲ ಮೂಡಿಸಿದ್ದು, ಈ ಬಗ್ಗೆ ನಿರ್ದೇಶಕ ಡಾ. ಸೂರಿ ಲವಲವಿಕೆ ಜತೆಗೆ ಮಾತನಾಡಿದ್ದಾರೆ.

ಸೂಪರ್‌ ಸ್ಪೆಶಲ್‌

ಬಘೀರ ಚಿತ್ರದ ಟ್ರೇಲರ್‌ ನೋಡಿದಾಗ ಇದು ಹೈ ಆಕ್ಟೇನ್‌ ಆ್ಯಕ್ಷನ್‌ ಸಿನಿಮಾ ಎಂದು ಅನಿಸುತ್ತದೆ. ಆದರೆ ಇದರಲ್ಲಿ ಅದಕ್ಕಿಂತಲೂ ಹೆಚ್ಚಿನ ವಿಷಯಗಳಿವೆ ಎಂದಿರುವ ಸೂರಿ, ‘ಮೊದಲನೆಯದಾಗಿ ಈ ಚಿತ್ರದಲ್ಲಿರುವ ಎಮೋಷನ್‌ ಎಲ್ಲರ ಮನಸ್ಸಿಗೆ ನಾಟುತ್ತದೆ. ಎರಡನೆಯದಾಗಿ ಇದರಲ್ಲಿರುವ ಆ್ಯಕ್ಷನ್‌ ಸನ್ನಿವೇಶಗಳು ಪ್ರತಿಯೊಬ್ಬರಿಗೂ ಇಷ್ಟವಾಗುತ್ತವೆ. ಈವರೆಗೆ ನೋಡಿರದಂತಹ ಸಾಹಸಗಳನ್ನು ಇಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ. ಮೂರನೆಯದಾಗಿ ಕ್ಯಾಮರಾ ವರ್ಕ್ ಹಾಗೂ ಸಂಗೀತ ಈ ಚಿತ್ರದ ವಿಶೇಷತೆಗಳಲ್ಲೊಂದು’ ಎಂದು ಹೇಳಿದ್ದಾರೆ.

ಕನ್ನಡದ ಸೂಪರ್‌ ಹೀರೊ

ಬಘೀರ ಎಂದರೆ ಕರಿ ಚಿರತೆ. ಹೀರೋನ ಪ್ರತಿನಿಧಿಸುವ ಮುಖವಿದು ಹಾಗೂ ಕತ್ತಲಲ್ಲಿ ಬರುವ ಸೂಪರ್‌ ಹೀರೊ ಮಾದರಿಯ ಪಾತ್ರವಿದು ಎಂದಿರುವ ನಿರ್ದೇಶಕರು, ‘ಪ್ರಶಾಂತ್‌ ನೀಲ್‌ ಹೇಳಿದ ಈ ಕಥೆಯ ಒಂದೆಳೆ ಬಹಳ ಇಷ್ಟವಾಯಿತು. ನನಗೆ ವೈಯಕ್ತಿಕವಾಗಿ ಬ್ಯಾಟ್‌ಮನ್‌ ಸಿಕ್ಕಾಪಟ್ಟೆ ಇಷ್ಟ. ಇದು ಕೂಡ ಅದೇ ರೀತಿಯಲ್ಲಿರುವುದು ಇನ್ನಷ್ಟು ಖುಷಿ ಕೊಟ್ಟಿತು. ಬಳಿಕ ಎರಡು ವರ್ಷಗಳ ಕಾಲ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಿ ಚಿತ್ರವನ್ನು ಅಂತಿಮಗೊಳಿಸಲಾಯಿತು. ಸೂಪರ್‌ ಹೀರೊ ಕಥೆಯೇ ಮಾಡಬೇಕು ಎಂಬ ಉದ್ದೇಶದಿಂದ ಮಾಡಿದ್ದಲ್ಲ. ಸಹಜವಾಗಿಯೇ ಆ ರೀತಿಯ ರೂಪ ಪಡೆಯಿತು’ ಎಂದು ಹೇಳಿದ್ದಾರೆ. ‘ಈ ಪಾತ್ರಕ್ಕೆ ನಟ ಶ್ರೀಮುರಳಿ ಸೂಕ್ತವಾಗಿ ಹೊಂದುತ್ತಾರೆ. ಅವರ ಜತೆಗೆ ಹಲವು ಕಥೆಗಳನ್ನು ಚರ್ಚೆ ಮಾಡಿದ್ದೆ. ಆದರೆ ಯಾವುದೂ ಇಬ್ಬರಿಗೂ ಓಕೆ ಆಗುತ್ತಿರಲಿಲ್ಲ. ಆಗ ಪ್ರಶಾಂತ್‌ ಹೇಳಿದ ಕಥೆ ಇಬ್ಬರಿಗೂ ಇಷ್ಟವಾಯಿತು’ ಎಂದಿದ್ದಾರೆ ಡಾ. ಸೂರಿ.

ಚಿತ್ರೀಕರಣದ ಸವಾಲು

ಈ ಸಿನಿಮಾ ಚಿತ್ರೀಕರಣ ತಡವಾಗಿದ್ದರ ಬಗ್ಗೆ ವಿವರಿಸಿರುವ ಸೂರಿ, ‘ಹಲವಾರು ಕಾರಣಗಳಿಂದ ಚಿತ್ರೀಕರಣ ತಡವಾಯಿತು. ಶ್ರೀಮುರಳಿಗೆ ಪೆಟ್ಟಾಗಿದ್ದು, ಗುಣಮುಖರಾಗುವ ಸಂದರ್ಭ ಒಂದೆಡೆಯಾದರೆ ಇನ್ನೊಂದೆಡೆ ನಮ್ಮ ಶೂಟಿಂಗ್‌ ಪ್ರಕ್ರಿಯೆ ದೊಡ್ಡದಿತ್ತು. ಮಂಗಳೂರು, ವೈಝಾಗ್‌ ಹೀಗೆ ಹಲವೆಡೆ ಚಿತ್ರೀಕರಣ ಮಾಡಬೇಕಿತ್ತು. ದೊಡ್ಡ ಸೆಟ್‌ಗಳನ್ನು ಹಾಕಬೇಕಿತ್ತು. ಹೀಗಾಗಿ ಶೂಟಿಂಗ್‌ ತಡವಾಗಿದ್ದಕ್ಕೆ ಎಲ್ಲರಿಗೂ ಬೇಸರವಿದೆ. ಆದರೆ ಇಡೀ ಪ್ರಕ್ರಿಯೆಯನ್ನು ಎಲ್ಲರೂ ಎಂಜಾಯ್‌ ಮಾಡಿಕೊಂಡೇ ಮಾಡಿದ್ದೇವೆ’ ಎಂದಿದ್ದಾರೆ.

ಕತ್ತಲೆಯಲ್ಲಿ ಬರುವ ಬಘೀರ

‘ಒಬ್ಬ ಹುಡುಗನ ಜೀವನ ಪಯಣದ ಕಥೆಯೇ ಬಘೀರ ಸಿನಿಮಾ. ಸತ್ಯದ ದಾರಿಯಲ್ಲಿನಡೆಯುವವನ ಜೀವನದಲ್ಲಿ ಏನಾಗುತ್ತದೆ ಎನ್ನುವುದನ್ನು ತೆರೆಯೆ ಮೇಲೆ ತೋರಿಸಿದ್ದೇವೆ. ಬಘೀರ ಎಂಬ ವ್ಯಕ್ತಿ ಬರುವುದೇ ರಾತ್ರಿಯ ವೇಳೆ. ಹೀಗಾಗಿ ಇದರ ಕೆಲವು ದೃಶ್ಯಗಳು ಕತ್ತಲಲ್ಲಿ ಇರಬೇಕಾಗಿರುವುದು ಅನಿವಾರ್ಯ. ಅದು ಬಿಟ್ಟರೆ ಇಡೀ ಸಿನಿಮಾ ಬೇರೆ ರೀತಿಯ ಅನುಭವವನ್ನೇ ನೀಡುತ್ತದೆ’ ಎಂದು ಡಾ. ಸೂರಿ ಹೇಳಿದ್ದಾರೆ. ‘ಇದರಲ್ಲಿ ಕಾಡುವ ಕಥೆ, ಅದ್ಭುತ ಸಿನಿಮಾಟಿಕ್‌ ಅನುಭವ, ಭರ್ಜರಿ ಆ್ಯಕ್ಷನ್‌ ಸನ್ನಿವೇಶಗಳನ್ನು ಜನರು ಖಂಡಿತಾ ನಿರೀಕ್ಷಿಸಬಹುದು. ಹಾಗೆಯೇ ಇದು ಇನ್ನೊಂದು ಕೆಜಿಎಫ್‌ ಸಿನಿಮಾ ಎನ್ನುವುದನ್ನು ಅವರು ತಲೆಯಿಂದ ತೆಗೆದು ಬಂದರೆ ಒಳ್ಳೆಯದು’ ಎಂದಿದ್ದಾರೆ ಅವರು.

“ಕಥೆ ಹಾಗೂ ಚಿತ್ರಕಥೆಯ ಮೂಲಕ ಒಂದೊಳ್ಳೆಯ ಸಿನಿಮಾಟಿಕ್‌ ಅನುಭವ ನೀಡುವ ಸಿನಿಮಾ ಮಾಡಿದ್ದೇವೆ ಎಂಬ ನಂಬಿಕೆ ಇದೆ. ದುಡ್ಡು ಕೊಟ್ಟು ಸಿನಿಮಾ ನೋಡುವ ಪ್ರೇಕ್ಷಕರಿಗೆ ಖಂಡಿತ ಮೋಸ ಆಗುವುದಿಲ್ಲ” ನಿರ್ದೇಶಕ ಡಾ. ಸೂರಿ ಹೇಳಿದ್ದಾರೆ.

Leave a Reply

Your email address will not be published. Required fields are marked *

Back To Top