ಮೂರನೇ ಪ್ರಾಜೆಕ್ಟ್‌- `ಸ್ವಿಫ್ಟ್ ಸಿಟಿ'

ಕ್ವಿನ್ ಸಿಟಿ ಯಶಸ್ವಿಯ ನಂತರ, ಕರ್ನಾಟಕ ಸರ್ಕಾರ ಇದೀಗ ಸ್ಟಾರ್ಟಪ್‌ಗಳಿಗಾಗಿ ಹೊಸ ಯೋಜನೆಯಾಗಿ ‘SWIFT’ ಸಿಟಿ ನಿರ್ಮಾಣಕ್ಕೆ ಮುಂದಾಗಿದೆ

ಎಲೆಕ್ಟ್ರಾನಿಕ್ ಸಿಟಿ ಮತ್ತು ಐಟಿಪಿಎಲ್ (ವೈಟ್‌ಫೀಲ್ಡ್‌) ಪ್ರಾಜೆಕ್ಟ್‌ಗಳ ಯಶಸ್ಸಿನ ನಂತರ, ಕರ್ನಾಟಕ ಸರ್ಕಾರ ತಂತ್ರಜ್ಞಾನದ ಬೆಳವಣಿಗೆಯ ಹೆಜ್ಜೆಯಾಗಿ ಮೂರನೇ ಪ್ರಾಜೆಕ್ಟ್‌- `ಸ್ವಿಫ್ಟ್ ಸಿಟಿ’ (SWIFT) ಸ್ಥಾಪನೆಗೆ ಮುಂದಾಗಿದೆ. ಬೆಂಗಳೂರಿನ ಸರ್ಜಾಪುರ ಪ್ರದೇಶವನ್ನು ಈ ಮಹತ್ವಾಕಾಂಕ್ಷಿ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಇದು ಹೊಸ ಸ್ಟಾರ್ಟಪ್‌ಗಳನ್ನು ಆಕರ್ಷಿಸಲು ಹಾಗೂ ರಾಜ್ಯದ ಕೈಗಾರಿಕಾ ವಿಕಸನಕ್ಕೆ ದಿಕ್ಕುನೀಡಲು ಕೇಂದ್ರೀಕೃತವಾಗಿದೆ. ಸ್ವಿಫ್ಟ್ ಸಿಟಿಯು ತಂತ್ರಜ್ಞಾನದ ಕ್ರಾಂತಿಗೆ ಹತ್ತಿರದ ಮೂಲಭೂತ ಸೌಕರ್ಯಗಳೊಂದಿಗೆ ಸಮಗ್ರ ವಿಕಾಸಕ್ಕೆ ಪ್ರೋತ್ಸಾಹ ನೀಡಲಿದೆ

ಇದು ‘SWIFT ಸಿಟಿ’ಯ ಭವಿಷ್ಯದ ನೋಟ. ಇದು ಬೆಂಗಳೂರಿನ ಸರ್ಜಾಪುರದ ಸ್ಮಾರ್ಟ್ ಸಿಟಿ ಯೋಜನೆಯ ಆಕರ್ಷಕ ಚಿತ್ರಣವಾಗಿದೆ, ಸ್ಟಾರ್ಟಪ್‌ಗಳ ಬೆಳವಣಿಗೆಗೆ ಅನುಕೂಲಕರ ವಾತಾವರಣ ನೀಡಲು ವಿನ್ಯಾಸಗೊಳಿಸಲಾಗಿದೆ.

ಬೆಂಗಳೂರು: ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ವ್ಯಾಪಕತೆ ಮತ್ತು ಸಮಗ್ರತೆ ತಂದುಕೊಡುವ ನಿಟ್ಟಿನಲ್ಲಿ `ಸ್ವಿಫ್ಟ್ ಸಿಟಿ’ (SWIFT- Startup, Work-Spaces, Intelligence, Finance & Technology) ನಿರ್ಮಾಣಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಬೆಂಗಳೂರಿನ ಸರ್ಜಾಪುರದಲ್ಲಿ ಇದನ್ನು ನಿರ್ಮಿಸಲು ನಿರ್ಧರಿಸಿದೆ.

ಇದು ಎಲೆಕ್ಟ್ರಾನಿಕ್ ಸಿಟಿ, ಐಟಿಪಿಎಲ್ (ಇಂಟರ್‌ನ್ಯಾಷನಲ್‌ ಟೆಕ್‌ ಪಾರ್ಕ್, ವೈಟ್‌ಫೀಲ್ಡ್‌) ಬಳಿಕ ಸರ್ಕಾರವೇ ಸ್ಥಾಪಿಸುತ್ತಿರುವ ಮೂರನೇ ಯೋಜಿತ ನಗರವಾಗಲಿದೆ. ಹೆಸರೇ ಹೇಳುವಂತೆ ಇದು ನವೋದ್ಯಮಗಳು, ಕೆಲಸದ ಸ್ಥಳಗಳು, ಬುದ್ಧಿಮತ್ತೆ, ಹಣಕಾಸು ಮತ್ತು ತಂತ್ರಜ್ಞಾನ ಈ ಐದೂ ಔದ್ಯಮಿಕ ವಲಯಗಳನ್ನು ಮುಖ್ಯವಾಗಿ ಪರಿಗಣಿಸಿದೆ. ಇದನ್ನು ಸಾಧಿಸಲು ಸರ್ಜಾಪುರ ಕೈಗಾರಿಕಾ ಪ್ರದೇಶದಲ್ಲಿ 1,000 ಎಕರೆಗೂ ಹೆಚ್ಚು ಜಮೀನನ್ನು ಮೀಸಲಿಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ ಹೇಳಿದ್ದಾರೆ.

‘ಬೆಂಗಳೂರಿನಲ್ಲಿ ಇಂದು ಸಾವಿರಾರು ಕಂಪನಿಗಳಿವೆ, ನಿಜ. ಆದರೆ ಇವುಗಳಿಗೆ ಯೋಜಿತ ಮತ್ತು ವ್ಯವಸ್ಥಿತ ತಾಣಗಳಿಲ್ಲ ಎನ್ನುವ ಅಸಮಾಧಾನ ಹಲವರಲ್ಲಿದೆ. ಆದ್ದರಿಂದ ಸರ್ಜಾಪುರದಲ್ಲಿ ಇಂತಹ ಹೆಜ್ಜೆ ಇಡಲಾಗುತ್ತದೆ. ಇಲ್ಲಿ 150 ಮೀ. ಅಗಲದ ಸಂಪರ್ಕ ರಸ್ತೆ ಮಾಡಿ, ಅಲ್ಲಿ ವಿಶ್ವ ದರ್ಜೆಯ ಸೌಲಭ್ಯಗಳು, ವಸತಿ ವ್ಯವಸ್ಥೆ, ಶಾಲೆಗಳು ಇರುವಂತೆ ಅಭಿವೃದ್ಧಿ ಪಡಿಸಲಾಗುವುದು. ನೆರೆ ರಾಜ್ಯಗಳಿಂದ ನಮಗೆ ತೀವ್ರ ಸ್ಪರ್ಧೆ ಇದೆ. ಹೀಗಾಗಿ ಇಂತಹ ಉಪಕ್ರಮ ಅನಿವಾರ್ಯ’ ಎನ್ನುವುದು ಎಂದು ಪಾಟೀಲ್‌ ತಿಳಿಸಿದ್ದಾರೆ

ಈ ಬಗ್ಗೆ ತಮ್ಮ ಚಿಂತನೆಗಳನ್ನು ಹಂಚಿಕೊಂಡಿರುವ ಅವರು, `ಸರ್ಜಾಪುರ ಪ್ರದೇಶವು ರಾಜಧಾನಿಯಲ್ಲಿರುವ ಐಟಿ ತಾಣಗಳಿಗೆ ಹತ್ತಿರದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ 44 ಮತ್ತು 48ಕ್ಕೆ ಹತ್ತಿರಲ್ಲಿದೆ. ಸಂಪರ್ಕ ಸೌಲಭ್ಯದ ದೃಷ್ಟಿಯಿಂದ ಇದು ವರದಾನವಾಗಿದ್ದು, ಈ ಭಾಗದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಬೆಳವಣಿಗೆಗೆಗೆ ಇಂಬು ನೀಡಲು ಸೂಕ್ತ ಸ್ಥಳವಾಗಿದೆ. ಇದನ್ನೆಲ್ಲ ಪರಿಗಣಿಸಿ, ಇದನ್ನು ಸ್ವಿಫ್ಟ್ ಸಿಟಿಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಇದು ಸ್ಟಾರ್ಟಪ್ ಹಬ್ ಆಗಲಿದ್ದು, ಇಲ್ಲಿ 8-10 ಅತ್ಯಾಧುನಿಕ ಪ್ಲಗ್ ಅಂಡ್ ಪ್ಲೇ ಸೌಲಭ್ಯಗಳು ಇರಲಿವೆ. ಇಂತಹ ಒಂದೊಂದು ಘಟಕಕ್ಕೂ 20-25 ಎಕರೆ ಕೊಡಲಾಗುವುದು’ ಎಂದಿದ್ದಾರೆ.

ಈ ಪ್ಲಗ್ ಅಂಡ್ ಪ್ಲೇ ಪ್ರದೇಶದಲ್ಲಿ ಸುಸಜ್ಜಿತ ಕಚೇರಿಗಳು, ವಸತಿ ಪ್ರದೇಶಗಳು, ಕೋ-ವರ್ಕಿಂಗ್ ತಾಣಗಳು ಎಲ್ಲವೂ ಇರಲಿವೆ. ಈ ಮೂಲಕ ಉದ್ಯಮಗಳ ಒಂದು ವ್ಯವಸ್ಥಿತ ಜಾಲ ಏರ್ಪಡಲಿದ್ದು, ಅವು ಪರಸ್ಪರ ಸಹಭಾಗಿತ್ವ ಏರ್ಪಡಿಸಿಕೊಳ್ಳುವುದು ಸುಗಮವಾಗಲಿದೆ.

ಮುಖ್ಯವಾಗಿ, ಇಡೀ ರಾಜ್ಯವನ್ನೇ ಹಂತಹಂತವಾಗಿ ‘ಸಿಲಿಕಾನ್ ರಾಜ್ಯ’ವನ್ನಾಗಿ ಮಾಡಲಾಗುವುದು. ಸಿಲಿಕಾನ್ ಸಿಟಿ ಅಂದ್ರೆ ಬೆಂಗಳೂರು. ಈಗ ಅದನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವುದು ನಮ್ಮ ಉದ್ದೇಶ. ವಿಜಯಪುರ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಐದು ನಗರಗಳಲ್ಲಿ ಮಿನಿ ಕ್ವಿನ್ ಸಿಟಿ ಅಭಿವೃದ್ಧಿಪಡಿಸುವುದರ ಮೂಲಕ ಇದನ್ನು ಸಾಕಾರಗೊಳಿಸುವ ಉದ್ದೇಶ ಇದೆ. ಇದಕ್ಕೆ ಐಟಿ ಇಲಾಖೆಯ ಸಹಕಾರವನ್ನೂ ಪಡೆಯಲಾಗುವುದು. ಫೆಬ್ರವರಿಯಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಈ ಸಂಬಂಧ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಪಾಟೀಲ್‌ ವಿವರಿಸಿದ್ದಾರೆ.

ಇದಲ್ಲದೆ, ಸ್ವಿಫ್ಟ್ ಸಿಟಿಯಲ್ಲಿ ನೆಲೆಯೂರಲಿರುವ ಸಣ್ಣ ಮತ್ತು ಮಧ್ಯಮ ಸ್ತರದ ಸ್ಟಾರ್ಟಪ್ ಉದ್ಯಮಗಳಿಗೆ ಕನಿಷ್ಠ 5,000 ಚದರ ಅಡಿಗಳಿಂದ ಹಿಡಿದು ಗರಿಷ್ಠ 20,000 ಚದರ ಅಡಿಗಳಷ್ಟು ಜಾಗವನ್ನು ಭೋಗ್ಯ, ಕ್ರಯ ಅಥವಾ ಬಂಡವಾಳ ಆಧರಿತ ಹಂಚಿಕೆ ಮಾದರಿಯಲ್ಲಿ ಒದಗಿಸಲಾಗುವುದು. ಈ ಮೂಲಕ, ಪ್ರವರ್ಧಮಾನಕ್ಕೆ ಬರುತ್ತಿರುವ ಹೊಸ ಬಗೆಯ ಉದ್ಯಮಗಳ ಅಗತ್ಯಗಳನ್ನು ಪೂರೈಸುವುದು ಸಾಧ್ಯವಾಗಬೇಕೆನ್ನುವುದು ನಮ್ಮ ಚಿಂತನೆಯಾಗಿದೆ. ಮುಖ್ಯವಾಗಿ ಇದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಡೇಟಾ ಅನಲಿಟಿಕ್ಸ್ ಮತ್ತು ಫಿನ್-ಟೆಕ್ ನಾವೀನ್ಯತಾ ಕೇಂದ್ರವಾಗಿಯೂ ಮುಂಚೂಣಿಗೆ ಬರಲಿದೆ ಎಂದು ಹೇಳಿದ್ದಾರೆ.

ಇದು ತೀವ್ರ ಸ್ಪರ್ಧೆಯಿಂದ ಕೂಡಿರುವ ಕಾಲಘಟ್ಟ. ಕೈಗಾರಿಕೋದ್ಯಮದ ದೃಷ್ಟಿಯಿಂದ ಇಡೀ ಕರ್ನಾಟಕವು ಸೂಜಿಗಲ್ಲಿನಂತೆ ಹೂಡಿಕೆದಾರರನ್ನು ಸೆಳೆಯುವಂತಿರಬೇಕು. ಇದಕ್ಕಾಗಿ ಸ್ವಿಫ್ಟ್ ಸಿಟಿ ತರಹದ ವಿನೂತನ ಪರಿಕಲ್ಪನೆಗಳು ಅತ್ಯಗತ್ಯ. ಇಲ್ಲದೆ ಹೋದರೆ, ನೆರೆಹೊರೆಯ ರಾಜ್ಯಗಳು ಇಂಥ ಅವಕಾಶಗಳನ್ನು ಬಾಚಿಕೊಂಡು ಬಿಡುತ್ತವೆ. ಎಲ್ಲರಿಗಿಂತ ಮೊದಲೇ ನಾವು ದಾಪುಗಾಲಿಟ್ಟುಕೊಂಡು ಮುನ್ನುಗ್ಗಬೇಕು ಎನ್ನುವುದು ರಾಜ್ಯ ಸರಕಾರದ ಸಂಕಲ್ಪ. ಇದರಿಂದ ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆ ಈ ಮೂರನ್ನೂ ಒಟ್ಟಿಗೇ ಸಾಧಿಸಬಹುದು ಎಂದು ಎಂಬಿ ಪಾಟೀಲ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

Back To Top