ಈ ಬಾರಿ ಭತ್ತದ ಉತ್ತಮ ಇಳುವರಿ ಸಾಧನೆಯಾಗಿದ್ದರೂ, ಬೆಲೆಗಳಲ್ಲಿ ನಿರೀಕ್ಷಿತ ಮಟ್ಟದ ಏರಿಕೆ ಕಂಡುಬಂದಿಲ್ಲ. ಮಾರುಕಟ್ಟೆಯಲ್ಲಿ ಭತ್ತಕ್ಕೆ ಕಡಿಮೆ ಬೇಡಿಕೆ ಇರುವುದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶ್ರಮ ಹಾಗೂ ವೆಚ್ಚವನ್ನು ಪುನರ್ನಿಮಿಸಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಸರಕಾರದಿಂದ ಬೆಂಬಲ ಬೆಲೆ ಹಾಗೂ ಖರೀದಿ ಯೋಜನೆಗಳು ಕಾರ್ಯಗತವಾಗುವುದರಿಂದ ಸಮಸ್ಯೆಗೆ ಪರಿಹಾರ ಸಿಕ್ಕುವ ನಿರೀಕ್ಷೆ ಇದೆ.
ಯಾದಗಿರಿ: ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ನಷ್ಟ ಅನುಭವಿಸುತ್ತಿದ್ದ ರೈತರು ಈ ಬಾರಿ ಉತ್ತಮ ಮಳೆಯಿಂದಾಗಿ ಜಿಲ್ಲೆಯಲ್ಲಿಈಗಾಗಲೇ ಬಹುತೇಕ ಭತ್ತದ ಬೆಳೆ ಕಟಾವು ಮುಗಿದಿದ್ದು, ಉತ್ತಮ ಇಳುವರಿಯೂ ಪಡೆದಿರುವ ರೈತರು ಲಾಭ ಮಾಡಿಕೊಳ್ಳಬಹುದು ಎಂದುಕೊಂಡಿದ್ದರು. ಆದರೆ, ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಇಳಿಕೆ ಹಾಗೂ ಬೇಡಿಕೆ ಕುಸಿತವಾಗಿರುವುದು ರೈತರಿಗೆ ನಿರಾಸೆ ಮೂಡಿಸಿದೆ
2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಯಾದಗಿರಿ ಜಿಲ್ಲೆಯಲ್ಲಿ 1,01,406.27 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಯ ಬಿತ್ತನೆ ಗುರಿ ಹೊಂದಲಾಗಿತ್ತು. ಆ ಪೈಕಿ 1,02,744 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ.101.32ರಷ್ಟು ಸಾಧನೆ ಆಗಿತ್ತು. ಶೇಕಡಾ 90ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಭತ್ತದ ಕಟಾವು ಕೂಡ ಮುಗಿದಿದೆ.
ನಾರಾಯಣಪುರ ಹಾಗೂ ಭೀಮಾ ನದಿಯ ಜಲಾನಯನ ಪ್ರದೇಶ, ನಾರಾಯಣಪುರ ಎಡದಂತೆ ಕಾಲುವೆಯ ಜಲಾಯನಯನ ಪ್ರದೇಶ ಹಾಗೂ ಪಂಪಸೆಟ್ ಆಶ್ರಯದಲ್ಲಿ ಭತ್ತ ಬೆಳೆದು ಉತ್ತಮವಾಗಿ ಇಳುವರಿ ಪಡೆದಿರುವ ರೈತರಿಗೆ ಉತ್ತಮ ಬೆಲೆಯೇ ಸಿಗದಂತಾಗಿದೆ.
ಆಂತಕದಲ್ಲಿ ರೈತ
ಇನ್ನೂ ಭತ್ತ ಕಟಾವಿನ ಸಮಯದಲ್ಲೇ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳಿಂದ ಭತ್ತ ಖರೀದಿಸಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು. ಆದರೆ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತಕ್ಕೆ ಬೆಂಬಲ ಬೆಲೆ ನಿಗದಿಪಡಿಸಲಾಗಿದ್ದರೂ, ಇನ್ನೂ ಖರೀದಿ ಕೇಂದ್ರಗಳಿಂದ ಖರೀದಿ ಪ್ರಕ್ರಿಯೆಯೇ ಆರಂಭವಾಗದಿರುವುದರಿಂದ ಭತ್ತದ ರಾಶಿ ಮಾಡಿಕೊಂಡಿರುವ ರೈತರು ಆತಂಕದಲ್ಲಿದ್ದಾರೆ.
ಕಡಿಮೆ ಬೆಲೆಗೆ ಮಾರಾಟ
ಆರ್.ಎನ್.ಆರ್ ಭತ್ತ 75 ಕೆಜಿಗೆ 1950 ರೂಪಾಯಿ ಇದ್ದ ಬೆಲೆ 1820 ರೂಪಾಯಿ ಇಳಿದಿದೆ. ಬಿಪಿಟಿ ಸೋನಾ 1,700 ರೂಪಾಯಿಂದ 1,550 ರೂಪಾಯಿಗೆ ಕುಸಿತವಾಗಿದೆ. ಭತ್ತ ಖರೀದಿ ಕೇಂದ್ರಗಳಿಂದ ಖರೀದಿ ಪ್ರಕ್ರಿಯೆ ಆರಂಭವಾಗದಿರುವುದರಿಂದ ಖರೀದಿ ಪ್ರಕ್ರಿಯೆ ಆರಂಭವಾಗುವವರೆ ಭತ್ತವನ್ನು ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಾಗದ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುವಂತಹ ಪರಿಸ್ಥಿತಿಯೂ ನಿರ್ಮಾಣವಾಗಿದೆ.